ಅದೇ ರೀತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (Dr. APJ Abdul Kalam) ಅವರು ಸಹ ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಪರಿವರ್ತಿಸುವ ಮಾಂತ್ರಿಕ ಶಕ್ತಿ ಎಂದು ನಂಬಿದ್ದವರು. ಜೊತೆಗೆ ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಂಬಿದ್ದ ಅವರು ಶಿಕ್ಷಣವನ್ನು ಉತ್ತೇಜಿಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವಲ್ಲಿ ಹಾಗೂ ತಮ್ಮ ಸ್ಪೂರ್ತಿದಾಯಕ ಮಾತಿನ ಮೂಲಕ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ ಕಲಾಂ ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು. ಈ ನಿಟ್ಟಿನಲ್ಲಿ ಕಲಾಂ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ (World Students’ Day) ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ವಿದ್ಯಾರ್ಥಿಗಳ ದಿನದ ಇತಿಹಾಸವೇನು?
ಡಾ. ಕಲಾಂ ಒಬ್ಬ ವಿಜ್ಞಾನಿ ಮತ್ತು ಭಾರತದ ಮಿಸೈಲ್ ಮ್ಯಾನ್ ಮಾತ್ರವಲ್ಲದೆ, ಯುವಜನರು ದೊಡ್ಡ ಕನಸು ಕಾಣಲು ಮತ್ತು ಅವುಗ ಳನ್ನು ಸಾಧಿಸಲು ಯಾವಾಗಲೂ ಪ್ರೇರೇಪಿಸುವ ಶಿಕ್ಷಕರೂ ಆಗಿದ್ದರು. ಅವರ ಬೋಧನಾ ಪರಂಪರೆ ಮತ್ತು ಅವರು ಸ್ಥಾಪಿಸಿದ ಆದರ್ಶಗಳನ್ನು ಗೌರವಿಸಲು ವಿಶ್ವಸಂಸ್ಥೆಯು ಅಕ್ಟೋಬರ್ 15 ಅನ್ನು ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿತು. ಮೊದಲ ಬಾರಿಗೆ 2010 ರಲ್ಲಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 79ನೇ ಜನ್ಮದಿನದಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು. ಶಿಕ್ಷಣ, ಪ್ರಪಂಚದಾದ್ಯಂತ ವಿದ್ಯಾರ್ಥಿಗಳ ಪ್ರಗತಿಗಾಗಿ ಅವರು ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರ ಮಹತ್ವದ ಕೊಡುಗೆಯನ್ನು ಗೌರವಿಸಲು ವಿಶ್ವ ಸಂಸ್ಥೆಯು ಡಾ. ಎ.ಪಿ.ಜೆ ಅಬ್ದಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ವಿದ್ಯಾರ್ಥಿಗಳ ದಿನದ ಮಹತ್ವವೇನು?
- ಈ ದಿನವು ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಮಗೆ ನೆನಪಿಸುತ್ತದೆ.
- ಸರಿಯಾದ ಅವಕಾಶಗಳನ್ನು ನೀಡಿದರೆ, ವಿದ್ಯಾರ್ಥಿಗಳು ವಿಶ್ವವನ್ನು ಬದಲಾಯಿಸುವವರಾಗಬಹುದು. ಆದ್ದರಿಂದ, ಈ ದಿನವು ಶಿಕ್ಷಣವು ಪ್ರತಿಯೊಬ್ಬರ ಹಕ್ಕು ಮತ್ತು ಎಲ್ಲರಿಗೂ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸಬೇಕು ಎಂಬುದನ್ನು ನೆನಪಿಸುತ್ತದೆ.
- ಸಮಾನ ಶೈಕ್ಷಣಿಕ ಅವಕಾಶಗಳನ್ನು ಉತ್ತೇಜಿಸುವುದು, ನಾವೀನ್ಯತೆಯ ಮನೋಭಾವವನ್ನು ಪ್ರೋತ್ಸಾಹಿಸುವುದು ಮತ್ತು ವಿದ್ಯಾರ್ಥಿಗಳ ಕೊಡುಗೆಗಳನ್ನು ಗುರುತಿಸುವುದು ವಿಶ್ವ ವಿದ್ಯಾರ್ಥಿ ದಿನದ ಉದ್ದೇಶವಾಗಿದೆ.
- ಅಲ್ಲದೆ ಶಿಕ್ಷಣವು ವ್ಯಕ್ತಿಗಳನ್ನು ಮಾತ್ರವಲ್ಲದೆ ಇಡೀ ಸಮಾಜಗಳನ್ನು ಪರಿವರ್ತಿಸುತ್ತದೆ ಎಂಬ ಡಾ. ಕಲಾಂ ಅವರ ನಂಬಿಕೆಯನ್ನು ಈ ದಿನ ಸ್ಮರಿಸುತ್ತದೆ.
- ಈ ದಿನದಂದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಹತ್ವದ ಪಾತ್ರ, ಸಾಧನೆಗಳು ಮತ್ತು ವಿದ್ಯಾರ್ಥಿಗಳಿಗೆ ಅವರು ನೀಡಿದ ಸ್ಫೂರ್ತಿಯನ್ನು ಈ ದಿನದಂದು ಸ್ಮರಿಸಲಾಗುತ್ತದೆ.
- ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಶಾಲಾ ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.ಈ ದಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಹತ್ವವನ್ನು ಸಾರಲಾಗುತ್ತದೆ. ಅಲ್ಲದೆ ಮಕ್ಕಳಿಗೆ ಡಾ. ಕಲಾಂ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ