ಭಾನುವಾರ, ಡಿಸೆಂಬರ್ 28, 2025

ಶಿಕ್ಷಣ: ಕೇಂದ್ರೀಯ ವಿ.ವಿ. ಅವಕಾಶದ ಹೆಬ್ಬಾಗಿಲು

ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯವು 'ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು' ಎಂದೇ ಕರೆಯಲಾಗುವ ಕಲಬುರಗಿಯಲ್ಲಿ ಕಾರ್ಯನಿರತವಾಗಿದೆ. ಸುಮಾರು ಒಂದೂವರೆ ದಶಕದ ಹಿಂದೆ ಸ್ಥಾಪನೆಯಾಗಿರುವ ಈ ವಿಶ್ವವಿದ್ಯಾಲಯವು 35 ವಿಭಾಗಗಳನ್ನು ಒಳಗೊಂಡಿದೆ. ವಿವಿಧ ರಾಜ್ಯಗಳ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ಉನ್ನತ ತರಬೇತಿ ಪಡೆದ 185 ಮಂದಿ ಪೂರ್ಣಕಾಲಿಕ ಪ್ರಾಧ್ಯಾಪಕರು ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದಾರೆ.

ರಾಷ್ಟ್ರವ್ಯಾಪ್ತಿ ಹೊಂದಿದ ಒಂದು ಸ್ವಾಯತ್ತ ಸಂಸ್ಥೆಯಾಗಿರುವ ವಿಶ್ವವಿದ್ಯಾಲಯವು ವರ್ತಮಾನದ ಔದ್ಯೋಗಿಕ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ, ಎನ್‌ಇಪಿ- 2020ರ ಅನುಸಾರ ಪಠ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಕೌಶಲ ಆಧಾರಿತ ಹಾಗೂ ಬಹುಶಿಸ್ತೀಯ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುತ್ತಿದೆ. ಅಗತ್ಯ ಮೂಲಸೌಕರ್ಯಗಳಾದ ಸುಸಜ್ಜಿತ ಗ್ರಂಥಾಲಯ, ಆಧುನಿಕ ಪ್ರಯೋಗಾಲಯ, ಉತ್ತಮ ಹಾಸ್ಟೆಲ್, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯಗಳನ್ನು ಒಳಗೊಂಡಿದೆ.

ಅತ್ಯುತ್ತಮ ಸಂಶೋಧನೆಗಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ಜತೆಗೆ ವಿಶ್ವವಿದ್ಯಾಲಯವು ಒಡಂಬಡಿಕೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಇಂಟರ್ನ್‌ಷಿಪ್ ಮೂಲಕ ಪ್ರಾಯೋಗಿಕ ವೃತ್ತಿಕೌಶಲಗಳನ್ನು ಕಲಿಸಲಾಗುತ್ತಿದೆ. ವ್ಯಕ್ತಿತ್ವ ವಿಕಸನಕ್ಕಾಗಿ ಅಗತ್ಯ ತರಬೇತಿ, ಇಂಗ್ಲಿಷ್ ಲ್ಯಾಬ್ ಮೂಲಕ ಭಾಷಾ ಕೌಶಲಗಳನ್ನು ಬೆಳೆಸುತ್ತಾ ಬಹುಶಿಸ್ತೀಯ ಅಧ್ಯಯನ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ.

ಇ -ಜರ್ನಲ್‌ಗಳು, ಡಿಜಿಟಲ್ ಸಂಪನ್ಮೂಲಗಳು, ಮುದ್ರಿತ ಪುಸ್ತಕಗಳ ಬೃಹತ್ ಸಂಗ್ರಹ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಾಗಿ ಬುಕ್ ಬ್ಯಾಂಕ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳು ಹಾಗೂ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗಾಗಿ ಬ್ರೈಲ್ ರಿಸೋರ್ಸ್ ಸೆಂಟರ್ ಮೂಲಕ ವಿಪುಲ ಅಧ್ಯಯನ ಸಾಮಗ್ರಿಗಳು ಇಲ್ಲಿನ ಅತ್ಯಾಧುನಿಕ ಗ್ರಂಥಾಲಯದಲ್ಲಿವೆ.

ನವೀನ ಆವಿಷ್ಕಾರಗಳನ್ನು ಸಾಧ್ಯವಾಗಿಸುವ ಸಫಿಸ್ಟಿಕೇಟೆಡ್ ಇನ್‌ಸ್ಟ್ರುಮೆಂಟೇಷನ್ ಸೆಂಟರ್ (ಎಸ್‌ಐಸಿ) ಅನ್ನು ಸ್ಥಾಪಿಸಲಾಗಿದೆ. ಇದು ಸಂಶೋಧಕರಿಗೆ ಉನ್ನತ ಮಟ್ಟದ ಉಪಕರಣಗಳನ್ನು ಒದಗಿಸಿ, ವಿಜ್ಞಾನ, ಎಂಜಿನಿಯರಿಂಗ್ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆಗಳಿಗೆ ದೃಢವಾದ ತಳಪಾಯವನ್ನು ಹಾಕಲು ಪೂರಕವಾಗಿದೆ. ಇಂತಹ ಒಂದು ಪ್ರಮುಖ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಅವಕಾಶವನ್ನು ಕರ್ನಾಟಕದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.

ಪ್ರವೇಶ ಹೇಗೆ ?

ಸ್ನಾತಕೋತ್ತರ ಪದವಿ

ದೇಶದ ಎಲ್ಲಾ 56 ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಏಕೀಕೃತ ಕೇಂದ್ರೀಯ ವಿ.ವಿ ಪ್ರವೇಶ ಪರೀಕ್ಷೆಯ (ಪಿಜಿಸಿಯುಇಟಿ) ಮೂಲಕವೇ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಈ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುತ್ತದೆ. 2026-27ನೇ ಸಾಲಿನ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ. ಪ್ರಸ್ತುತ ಪದವಿಯ 5 ಅಥವಾ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 14 ಅರ್ಜಿ ಸಲ್ಲಿಕೆಗೆ
ಕೊನೆಯ ದಿನ.

ಇಲ್ಲಿ ಅರ್ಜಿ ಸಲ್ಲಿಸಿ: https://www.cuk.ac.in/ ಅಥವಾ https://exams.nta.nic.in/cuet-pg/

ಮಾರ್ಚ್ ತಿಂಗಳಲ್ಲಿ ಪ್ರವೇಶ ಪರೀಕ್ಷೆ ಇರುತ್ತದೆ. ರಾಜ್ಯದಲ್ಲಿ ಮಂಗಳೂರು, ಉಡುಪಿ, ಶಿವಮೊಗ್ಗ, ಬೆಂಗಳೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಬೆಳಗಾವಿ, ಹಾಸನ ಮೊದಲಾದ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.

ಯಾವೆಲ್ಲ ಕೋರ್ಸ್‌ ಲಭ್ಯ?: ಎಂ.ಎ., ಎಂ.ಎಸ್ಸಿ., ಎಂ.ಕಾಂ., ಎಂ.ಬಿ.ಎ., ಎಂ.ಎಸ್‌.ಡಬ್ಲ್ಯು., ಎಂ.ಸಿ.ಎ., ಎಲ್.ಎಲ್.ಎಂ., ಎಂ.ಇಡಿ., ಎಂ.ಟೆಕ್., ಎಂ.ಪಿ.ಎ. (ಮಾಸ್ಟರ್‌ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌) ವಿಭಾಗಗಳಲ್ಲಿ ವಿವಿಧ ಕೋರ್ಸ್‌ಗಳು ಲಭ್ಯ ಇವೆ.

ಪದವಿ ಕೋರ್ಸ್

16 ಪದವಿ ಕೋರ್ಸ್‌ಗಳು ಲಭ್ಯವಿದ್ದು, ಇವುಗಳ ಪ್ರವೇಶ ಪರೀಕ್ಷೆಯನ್ನೂ ಎನ್‌ಟಿಎ ಆಯೋಜಿಸುತ್ತದೆ. ಸಾಮಾನ್ಯವಾಗಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ.

ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎನ್‌ಇಪಿ- 2020ರ ಅನುಸಾರ ರೂಪಿಸಲಾದ ಬಹುಶಿಸ್ತೀಯ ನವೀನ ಪಠ್ಯಕ್ರಮದಲ್ಲಿ ಪದವಿಯನ್ನು ಪೂರೈಸಬಹುದು.

ಯಾವ ವಿಭಾಗ?: ಬಿ.ಎ., ಬಿ.ಎಸ್ಸಿ., ಬಿ.ಇಡಿ., ಬಿ.ಟೆಕ್., ಬಿಬಿಎ ಹಾಗೂ ಸಮಾಜಕಾರ್ಯ, ಎಲ್.ಎಲ್.ಬಿ. ವಿಭಾಗಗಳಲ್ಲಿ ವಿವಿಧ ಕೋರ್ಸ್‌ಗಳು ಲಭ್ಯ ಇವೆ.

ಪಿಎಚ್‌.ಡಿ. ಅಧ್ಯಯನ

ವಿಶ್ವವಿದ್ಯಾಲಯದ ಎಲ್ಲ ಸ್ನಾತಕೋತ್ತರ ವಿಭಾಗಗಳಲ್ಲೂ ಪಿಎಚ್‌.ಡಿ. ಅಧ್ಯಯನಕ್ಕೆ ಅವಕಾಶವಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಎರಡು ಬಾರಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗುತ್ತದೆ. ಜೆಆರ್‌ಎಫ್‌ ಅಥವಾ ಯುಜಿಸಿ-ಎನ್‌ಇಟಿ ಪೂರೈಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಪ್ರತಿ ವಿಭಾಗವೂ ಪ್ರವೇಶ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಯಾವುದೇ ಫೆಲೋಷಿಪ್ ಇಲ್ಲದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವೇ ಮಾಸಿಕ ಕನಿಷ್ಠ ಫೆಲೋಷಿಪ್ ನೀಡಿ ಸಂಶೋಧನೆಗೆ ಪ್ರೋತ್ಸಾಹಿಸುತ್ತದೆ.

ಕನಿಷ್ಠ ಶುಲ್ಕ - ಗರಿಷ್ಠ ಸೌಲಭ್ಯ

ಹಾಸ್ಟೆಲ್ ವ್ಯವಸ್ಥೆ, ಆಧುನಿಕ ಪ್ರಯೋಗಾಲಯಗಳನ್ನು ಒಳಗೊಂಡ ಶಿಕ್ಷಣವನ್ನು ಕನಿಷ್ಠ ವಾರ್ಷಿಕ ಶುಲ್ಕದೊಂದಿಗೆ ನೀಡಲಾಗುತ್ತಿದೆ. ರಾಜ್ಯದ ಅನೇಕ ಸರ್ಕಾರಿ ವಿಶ್ವವಿದ್ಯಾಲಯಗಳು ಅಥವಾ ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ಇಲ್ಲಿ ಶುಲ್ಕವು ಗಣನೀಯವಾಗಿ ಕಡಿಮೆ ಇರುವುದರಿಂದ ಸಂಸ್ಥೆಯು ಬಡವರ್ಗದ ವಿದ್ಯಾರ್ಥಿಗಳಿಗೂ ವರದಾನವಾಗಿದೆ. ಸರ್ಕಾರದ ನೀತಿಯ ಅನ್ವಯ ಶುಲ್ಕ ವಿನಾಯಿತಿಯ ಸೌಲಭ್ಯ ಪಡೆಯಲು ಅರ್ಹರಾದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಸಂಪೂರ್ಣ ಅನುಕೂಲಗಳನ್ನು ಒದಗಿಸುತ್ತದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

📰 ನ್ಯೂಸ್ ಮತ್ತು ವಿಶೇಷ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ